ಬಾಗ್ಸ್, ರಾಲ್ಫ್ ಸ್ಟೀಲ್
1901. ಅಮೆರಿಕ ಹಾಗೂ ಸ್ಪ್ಯಾನಿಷ್ ಜಾನಪದ ವಿದ್ವಾಂಸ. ಜಾನಪದ ಅಧ್ಯಯನಕ್ಕೆ ಶಾಸ್ತ್ರೀಯ ವರ್ಗಸೂಚಿಯೊಂದನ್ನು ನೀಡಿ ಹೆಸರಾದವ. 1930ರಲ್ಲಿ ಷಿಕಾಗೊ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಪ್ಯೂರ್‍ಟ್ಟರೀಕೋ ವಿಶ್ವವಿದ್ಯಾಲಯದಲ್ಲಿ ಜಾನಪದದ ಬಗ್ಗೆ ತರಬೇತಿ ನೀಡುವ ಕೆಲಸಕ್ಕೆ ನಿಯಮಿತನಾದ. ಅನಂತರ ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯದಲ್ಲಿ ಸ್ಪ್ಯಾನಿಷ್ ಮತ್ತು ಜಾನಪದದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಅಲ್ಲದೆ ಫೋಕ್-ಲೋರ್ ಅಮೆರಿಕಾಸ್ ಸಂಸ್ಥೆಯ ನಿರ್ದೇಶಕನಾಗಿಯೂ ಆಯ್ಕೆಗೊಂಡ. ಈತ ವಿಶ್ವವಿದ್ಯಾಲಯದಲ್ಲಿ ಪಾಠ ಹೇಳುವಾಗ ಸುತ್ತಮುತ್ತಣ ಉಪಾಧ್ಯಾಯರುಗಳಿಗೆ ಜಾನಪದ ಸಾಮಗ್ರಿಯನ್ನು ಸಂಗ್ರಹಿಸಲು ಕರೆಕೊಟ್ಟ. ಸಂಗ್ರಹೀತ ಸಾಮಗ್ರಿಗಳನ್ನು ಹೇಗೆ ವರ್ಗೀಕರಿಸಬೇಕೆಂದು ಅನೇಕ ರೀತಿಯಲ್ಲಿ ಪ್ರಯೋಗ ನಡೆಸಿದ. ಇದರ ಫಲವಾಗಿ ಹೊರಬಂದ ಈತನ ಜಾನಪದ ವರ್ಗ ಸೂಚಿ ಜಾನಪದ ಸಾಮಗ್ರಿಗಳನ್ನು ವರ್ಗೀಕರಿಸುವುದು ಮಾತ್ರವಲ್ಲದೆ ಕ್ಷೇತ್ರ ಕಾರ್ಯದಲ್ಲೂ ಉಪಯುಕ್ತವಾಯಿತು. ಈ ಬಗ್ಗೆ ವಿಶದೀಕರಣಕ್ಕಾಗಿ ಪ್ರಬುದ್ಧ ಜಾನಪದ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ. ಮೆಕ್ಸಿಕೋ ಮತ್ತು ಲ್ಯಾಟಿನ್ ಅಮೆರಿಕ ಜಾನಪದ ಬಗ್ಗೆ ಗ್ರಂಥ ಸೂಚಿಗಳನ್ನೂ ಹೊರತಂದ.
(ಎಚ್.ಎಸ್.ಆರ್.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ